ಕೃಷ್ಣರಾಯ, ಕೃಷ್ಣಗಿರಿ
1890-1966. ಕನ್ನಡ ನಾಡಿನ ಕೇವಲ ಕೆಲವೇ ಪ್ರಸಿದ್ಧ ಗಮಕಿಗಳಲ್ಲೊಬ್ಬರು. ಭಾರತದ ಕೃಷ್ಣರಾಯರು ಎಂದೇ ಪ್ರಸಿದ್ಧಿ ಪಡೆದ ಇವರು ಹುಟ್ಟಿದ್ದು ಹಾಸನದಲ್ಲಿ. ತಂದೆ ಕೃಷ್ಣಗಿರಿ ಅನಂತಯ್ಯ. ತಾಯಿ ನಾಮಗಿರಿಯಮ್ಮ. ಇವರ ಪೂರ್ವಜರು ಆಂಧ್ರದವರು. ಮಾತೃಭಾಷೆ ತೆಲುಗು. ಇವರ ಹಿರಿಯರು ಮೈಸೂರಿಗೆ ಬಂದು ನೆಲಸಿದ್ದರಿಂದ ಮನೆಮಾತು ಕನ್ನಡವಾಯಿತು. ತಾಯಿತಂದೆಗೆ ಮೂರನೆಯ ಪುತ್ರನಾಗಿ ಜನಿಸಿದ ಕೃಷ್ಣರಾಯರು ಹಸುಗೂಸಾಗಿದ್ದಾಗಲೆ ತಂದೆಯನ್ನು ಕಳೆದುಕೊಂಡರು. ಸೋದರಮಾವನ ಪೋಷಣೆಯಲ್ಲಿ ಬಾಲ್ಯವನ್ನು ಕಳೆದು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿದರಾದರೂ ಕಾರಣಾಂತರದಿಂದ ಪದವಿಯನ್ನು ಪಡೆಯಲಾಗಲಿಲ್ಲ. ಅನಂತರ ಅದೇ ಕಾಲೇಜಿನಲ್ಲಿ ಗುಮಾಸ್ತರಾಗಿ ಸೇರಿ ಕೊನೆಗೆ ಕಾಲೇಜಿನ ಪುಸ್ತಕ ಭಂಡಾರಿಗಳಾಗಿ ಕೆಲಸ ನಿರ್ವಹಿಸಿ ನಿವೃತ್ತರಾದರು.

	ಕೃಷ್ಣರಾಯರಿಗೆ ಚಿಕ್ಕಂದಿನಿಂದ ಸಂಗೀತದ ಖಯಾಲಿ. ಅವರ ಚಿಕ್ಕಪ್ಪ ರಾಮಾಯಣ ಪಾರಾಯಣದ ರಾಮಚಂದ್ರರಾಯರು-ಸಬ್ ಡಿವಿಜನ್ ಆಫೀಸರರಾಗಿದ್ದವರು-ಸ್ವತ: ದೇವರ ನಾಮಗಳನ್ನು ರಚಿಸಿ ಹಾಡುತ್ತಿದ್ದರು. ಜಮಾಬಂದಿ ಕಾಲದಲ್ಲಿ ಸಂಜೆಯ ಹೊತ್ತು ಜನರಿಗೆ ರಾಮಾಯಣವನ್ನು ಪರಿಚಯ ಮಾಡಿಕೊಡುವುದು ಅವರ ಒಂದು ಹವ್ಯಾಸವಾಗಿತ್ತು. ಕೃಷ್ಣರಾಯರ ಅಕ್ಕ ಮತ್ತು ಸೋದರತ್ತೆ ಕಂಠಶ್ರೀಯುಳ್ಳ ಹಾಡುಗಾರರು. ಅವರು ಹೇಳುವ, ಹೇಳಿಕೊಟ್ಟ ಹಾಡನ್ನು ಈ ಮಗು ಕಲಿತಿತು. ಬಾಲ್ಯದಲ್ಲಿಯೇ ಕೃಷ್ಣರಾಯರು ಪಿಟೀಲು ವಾದನವನ್ನು ಅಭ್ಯಾಸ ಮಾಡಿ ಸಂಗೀತ ಪ್ರಜ್ಞೆಯನ್ನು ಬೆಳೆಸಿಕೊಂಡರು. ಕಡೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಕೊಯಮತ್ತೂರು ಗಂಗಪ್ಪನವರ ಮಕ್ಕಳಾದ ಸಂಗೀತ ವಿದ್ವಾನ್ ಸುಬ್ಬಣ್ಣನವರಲ್ಲಿ ಎರಡು ವರ್ಷ ಸತತವಾಗಿ ಶಾಸ್ತ್ರೀಯ ಸಂಗೀತವನ್ನು ಕಲಿತರು. ಆಗ ಪ್ರಸಿದ್ಧರಾಗಿದ್ದ ಬಿಡಾರಂ ಕೃಷ್ಣಪ್ಪನವರು, ವೈಣಿಕ ಶಿಖಾಮಣಿ ವೀಣೆ ಶೇಷಣ್ಣ, ವಾಸುದೇವಾಚಾರ್ಯ-ಮೊದಲಾದ ಸಂಗೀತ ವಿದ್ವಾಂಸರ ಹಾಡುಗಾರಿಕೆಯನ್ನು ಕೇಳಿ ಕೇಳಿ ತಾವೂ ಉತ್ತಮ ಸಂಗೀತಗಾರರಾದರು.

	ಸಂಗೀತ ಕಲಿಕೆಯನ್ನು ಹವ್ಯಾಸ ಮಾಡಿಕೊಂಡು ಪುಸ್ತಕ ಭಂಡಾರದ ಅಧಿಕಾರಿಗಳಾಗಿ ಕೃಷ್ಣರಾಯರು ಕ್ರಮೇಣ ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳನ್ನು ರೂಢಿಸಿಕೊಂಡರು. ಕಾನಕಾನಹಳ್ಳಿ ವರದಾಚಾರ್ಯರು, ಬಿ.ಎಂ.ಶ್ರೀ.-ಮೊದಲಾದವರ ಸ್ನೇಹಲಾಭ, ಎಂ.ಆರ್.ಶ್ರೀ. ಅಂಥವರ ಬಂಧುತ್ವ ಸಂಪರ್ಕಗಳಿಂದ ಇವರ ಮನಸ್ಸು ಸಾಹಿತ್ಯ, ಗಮಕಗಳ ಕಡೆ ತಿರುಗಿತು. ಒಮ್ಮೆ ಎಂ.ಆರ್.ಶ್ರೀ. ಅವರು ಕೃಷ್ಣರಾಯರಿಗೆ ಕದರ ಮುಂಡಿಗೆದಾಸರ ಮೊಮ್ಮಕ್ಕಳಾದ ಕೆ.ಎನ್. ಧೀರೇಂದ್ರದಾಸರ ಮತ್ತು ಬಿಂದೂರಾಯರ ಭೇಟಿ ಮಾಡಿಸಿದರು; ಬಿಂದೂರಾಯರ ಭಾರತವಾಚನವನ್ನು ಕೇಳಿಸಿದರು. ಇದು ನಡೆದದ್ದು 1919ರ ಸುಮಾರಿನಲ್ಲಿ. ಅಲ್ಲಿಂದ ಬಿಂದೂರಾಯರಿಗೂ ಕೃಷ್ಣರಾಯರಿಗೂ ಸ್ನೇಹ ಬೆಳೆಯಿತು. ಅದರಿಂದಾಗಿ ಕೃಷ್ಣರಾಯರ ಸಂಗೀತ ಗಮಕದ ಕಡೆಗೆ ತಿರುಗಿತು. ತಮ್ಮ ಕಲೆಗೆ ಸಂಗೀತದ ನೆರವನ್ನು ಪಡೆದು ರಾಯರು ಅಲ್ಲಿಂದ ಮೂವತ್ತು ವರ್ಷಗಳ ಕಾಲ ತಮ್ಮ ವಾಚನದಿಂದ ಕನ್ನಡಿಗರಿಗೆ ಕನ್ನಡ ಬೃಹತ್ ಕಾವ್ಯಗಳ ಪರಿಚಯ ಮಾಡಿಕೊಟ್ಟರು.

	1938-40ರ ಸುಮಾರಿನಲ್ಲಿ ಕುವೆಂಪು ಅವರು ರಾಯರ ಕೈಲಿ ಚಿತ್ರಾಂಗದಾ ಮತ್ತು ಶ್ರೀರಾಮಾಯಣ ದರ್ಶನಂ ಕಾವ್ಯಗಳನ್ನು ಓದಿಸಿ ಸಂತೋಷಪಟ್ಟರು. ಟಿ.ಎಸ್. ವೆಂಕಣ್ಣಯ್ಯ ಮತ್ತು ಕುವೆಂಪು ಅವರು ಒಮ್ಮೆ ಚಿತ್ರಾಂಗದಾ ಕಾವ್ಯವನ್ನು ಪೂರ್ಣವಾಗಿ ರಾಯರಿಂದ ವಾಚನ ಮಾಡಿಸಿದ್ದುಂಟು.

	ಕೃಷ್ಣರಾಯರ ಓದುಗಾರಿಕೆ ವಿಶಿಷ್ಟವಾದುದು; ಆ ವ್ಯಕ್ತಿಗೇ ಮೀಸಲಾದುದು. ಸಂಗೀತಕ್ಕೆ ಸಂಗೀತ, ಸಾಹಿತ್ಯಕ್ಕೆ ಸಾಹಿತ್ಯ-ಇವೆರಡನ್ನೂ ಬೆರೆಸಿ ಗಮಕ ಕೆಡದಂತೆ, ರಸಭಂಗವಾಗದಂತೆ ಇವರು ಕಾವ್ಯವಾಚನ ಮಾಡುತ್ತಿದ್ದರು. ಪದ್ಯದ ಅರ್ಥವನ್ನು ಇಂಗ್ಲಿಷ್ ಕಾವ್ಯಗಳಲ್ಲಿ ಬರುವ ಸನ್ನಿವೇಶ, ಉಪಮೆ, ಹೋಲಿಕೆಗಳೊಡನೆ ವಿವರಿಸಿ, ಅನಂತರ ಪದ್ಯವನ್ನೂ ಓದಿ ಅದರ ಭಾವ ಕೇಳುಗರ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುವಂತೆ ಇವರು ವಾಚನ ಮಾಡುತ್ತಿದ್ದರು.

	ಕೃಷ್ಣರಾಯರದು ಗಡುಸಾದರೂ ಸುಮಧುರವಾದ ಶಾರೀರ. ಹಿತಮಿತವಾಗಿ ಆನಂದರಸಮಯವಾಗಿ ಕಾವ್ಯವನ್ನು ಪೊಗದಸ್ತಾಗಿ ಓದುವುದು ಇವರ ವೈಶಿಷ್ಟ್ಯ. ಸಂಗೀತವನ್ನು ಕೇವಲ ಅಡಿಪಾಯವಾಗಿ ಬಳಸಿ, ಸ್ಥೂಲ ಸೂಚನೆಗಳಿಂದ ಮಾತ್ರ ರಾಗದ ಛಾಯೆಯನ್ನು ತೋರಿಸಿ ಕಾವ್ಯವನ್ನು ಪ್ರಧಾನವಾಗಿ ಎತ್ತಿ ನಿಲ್ಲಿಸುತ್ತಿದ್ದುದು ಕೃಷ್ಣರಾಯರ ಗಮಕಶೈಲಿ.

	ಕನ್ನಡ ಜನ ಇವರನ್ನು 1935ರಲ್ಲಿ ಬೇಲೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಗಮಕ ಗೋಷ್ಠಿಗೆ ಅಧ್ಯಕ್ಷರನ್ನಾಗಿ ಆರಿಸಿ ಗೌರವಿಸಿದರು.

	ಕೃಷ್ಣರಾಯರು ಭಾರತದ ಕೃಷ್ಣರಾಯರಾಗಿ ಕನ್ನಡ ನಾಡಿನಲ್ಲೆಲ್ಲ ಸಂಚರಿಸಿ ಕನ್ನಡ ಕಾವ್ಯಗಂಗೆಯನ್ನು ಗಮಕ ಪಥದಲ್ಲಿ ಹರಿಸಿ ಕನ್ನಡಿಗರನ್ನು ಪವಿತ್ರಹೃದಯರನ್ನಾಗಿ ಮಾಡಿ ಕೀರ್ತಿಶೇಷರಾದರು. ಶ್ರೀಯುತರು ತಮ್ಮ 76ನೆಯ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಇಹಜೀವನವನ್ನು ಮುಕ್ತಾಯಗೊಳಿಸಿದರು. ಇರುವಷ್ಟು ಕಾಲವೂ ತಮ್ಮ ಕಲೆಯನ್ನು ಶಿಷ್ಯರಿಗೆ ಹಂಚಿ ಗಮಕ ಕಲೆ ತಲೆ ಎತ್ತುವಂತೆ ಮಾಡಿದರು.

	ಸರಳತೆ, ಸರಸತೆ, ಔದಾರ್ಯ, ಸ್ನೇಹಪರತೆ, ವಿದ್ಯಾರ್ಥಿಪ್ರಿಯತೆ, ವಿನಯಶೀಲತ್ವ-ಇವು ಕೃಷ್ಣರಾಯರ ವಿಶಿಷ್ಟ ಗುಣಗಳು.   

  											 (ಆರ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ